Wednesday, May 2, 2018

ಮಾವಿನಕಾಯಿ ಹೋಳು ಉಪ್ಪಿನಕಾಯಿ

ಉಪ್ಪಿನಕಾಯಿ ಎಂದರೆ ಊಟ ತಿಂಡಿಯೊಂದಿಗೆ ನೆಂಚಿಕೊಳ್ಳಲು ಇಷ್ತ. ದಕ್ಷಿಣ ಭಾರತದ ಜನ ಮೊಸರನ್ನದ ಒಟ್ಟಿಗೆ ತಿಂದರೆ ಉತ್ತರ ಭಾರತದ ಜನ ಚಪಾತಿ, ಪರೋಟ ಹೀಗೆ ಬದಿಯಲ್ಲಿ ಉಪ್ಪಿನಕಾಯಿ ಇರಲೇಬೇಕು. ಮಂಗಳೂರು, ಉಡುಪಿ, ಮಲೆನಾಡಿನ ಜನತೆಗೆ ಉಪ್ಪಿನಕಾಯಿ ಪ್ರಾಣ. ಯಾಕೆ ಅಂತೀರಾ?  ಕೊಚ್ಚಕ್ಕಿ ಗಂಜಿ, ಇಡ್ಲಿ, ದೋಸೆ, ರೊಟ್ಟಿ ಎಲ್ಲದಕ್ಕೂ ಉಪ್ಪಿನಕಾಯಿ ಬೇಕೇ ಬೇಕು. ಉಪ್ಪಿನಕಾಯಿ ಇಲ್ಲದ ಊಟ ರುಚಿ ಇಲ್ಲ ಅನ್ನೋ ಸ್ವಭಾವದವರು ಈ ಜನ.
ಏನೇ ಇರಲಿ ಮುಂಚೆ ಮನೆ ಮನೆಯಲ್ಲೂ ಉಪ್ಪಿನಕಾಯಿ ಮಾಡುತ್ತಿದ್ದರಂತೆ. ಈಗ ಆ ಸಂಪ್ರದಾಯ ಕೈಯಲ್ಲಿ ಸಾಗ್ತಾ ಇಲ್ಲ. ಉಪ್ಪಿನಕಾಯಿ ತಿನ್ನೋ ಜನ ಕಡಿಮೆಯಾಗ್ತಾ ಬರ್ತಾ ಇರೋದು ಒಂದ್ ಕಡೆಯಾದರೆ, ಮನೇಲಿ ಹಾಕುವ ಅಬ್ಯಾಸ ಇಲ್ಲದವರು ಇನ್ನೊಂದು ಕಡೆ. ಉಪ್ಪಿನಕಾಯಿ ತೊಗೊಂಡುಬಿಡೋಣ ಅನ್ನೋರು ಸುಮಾರು ಜನ. ಹಾಗಾಗಿ ಉಪ್ಪಿನಕಾಯಿ ಮಾಡೋದು ಸ್ವಲ್ಪ ಕಡಿಮೆ ಆಗ್ತಾ ಇದೆ ಅನ್ನಬಹುದು.
ಈ ಉಪ್ಪಿನಕಾಯಿ ಪುರಾಣ ಬಿಟ್ಟು ಉಪ್ಪಿನಕಾಯಿ ಹೇಗೆ ಮಾಡೋದು ಅನ್ನೋದನ್ನ ನೋಡೋಣ .
ಇಲ್ಲಿ ನಾ ಮಾಡ್ತಾ ಇರೋದು ದಿಡೀರ್ ಉಪ್ಪಿನಕಾಯಿ. ಈ ರೀತಿ ಉಪ್ಪಿನಕಾಯಿಯನ್ನ ನಾವು
ಹೋಳು ಉಪ್ಪಿನಕಾಯಿ
ಬೇಕಾದ ಪದಾರ್ಥಗಳು :
ಗಟ್ಟಿಯಾದ ಹಸಿರು ಮಾವಿನಕಾಯಿಗಳು : 10 ರಿಂದ 12
ಉಪ್ಪು : ೧/೨ ಕಪ್, ೪ ರಿಂದ ೫ ದೊಡ್ಡ ಚಮಚ
ಇಂಗು : ಚಿಟಿಕೆ
ಮೆಣಸಿನ ಪುಡಿ ; ೨ ದೊಡ್ಡ ಚಮಚ
ಸಾಸಿವೆ : ೧ ದೊಡ್ಡ ಚಮಚ
ಮೆಂತ್ಯ ; ೧ ಚಿಕ್ಕ ಚಮಚ
ಕೊಬ್ಬರಿ ಎಣ್ಣೆ : ೨ ದೊಡ್ದಚಮಚ
ಸಾಸಿವೆ : ಒಗ್ಗರಣೆಗೆ : ೧ ಚಿಕ್ಕ ಚಮಚ
ನೀರು : ೨ ಸಣ್ಣ ಲೋಟದಷ್ಟು
ವಿಧಾನ :
ಮಾವಿನ ಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಶುಚಿಯಾದ ಬಟ್ಟೆಯಲ್ಲಿ ಒರೆಸಿ. ನೀರಿನ ಪಸೆ ಸ್ವಲ್ಪ ಸಹ ಇರಬಾರದು.
ಮಾವಿನಕಾಯಿಯನ್ನು ಸಣ್ಣದಾಗಿ ಹೆಚ್ಚಿ ೧ ಸಣ್ಣ ಚಮಚೆಯಷ್ಟು ಉಪ್ಪು ಸೇರಿಸಿ ಕಲೆಸಿಡಿ.
ಒಂದು ಪಾತ್ರೆಯಲ್ಲಿ ಎರಡು ಕಪ್ಪು ನೀರು ಹಾಕಿ, ಮೇಲೆ ಹೇಳಿದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಅದು ಕುದಿದು ಅರ್ಧದಷ್ಟು ಪ್ರಮಾಣಕ್ಕೆ ಬಂದಾಗ ಉಪ್ಪು ಸೇರಿಸಿದ ಮಾವಿನಕಾಯಿಯನ್ನು ಕುದಿಯುತ್ತಿರುವ ಉಪ್ಪು ನೀರಿಗೆ ಹಾಕಿ ೨ ರಿಂದ ಮೂರು ನಿಮಿಷದಷ್ಟು ಕುದಿಯಲಿ. ಬೆಂಕಿ ಆರಿಸಿ ಮಾವ್ವು - ಉಪ್ಪಿನ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ಒಂದು ಸಣ್ಣ ಬಾಣಲೆಯಲ್ಲಿ ಮೆಂತ್ಯ ಹುರಿಯಿರಿ. ಅದು ಕಂದು ಬಣ್ಣಕ್ಕೆ ಬಂದಾಗ ಸಾಸಿವೆ ಸೇರಿಸಿ ಹುರಿಯಿರಿ. ಸಾಸಿವೆ ಪಟ ಪಟ ಹೊಟ್ಟುತ್ತಿದ್ದಂತೆ ಅದನ್ನು ಕೆಳಗಿಟ್ಟು ಮೆಣಸಿನ ಪುಡಿ ಸೇರಿಸಿ. ತಣ್ಣಗಾದ ನಂತರ ಈ ಮಿಶ್ರಣವನ್ನು ಮಿಕ್ಷಿ ಜಾರಲ್ಲಿ ಹಾಕಿ ಸ್ವಲ್ಪ ಪುಡಿ ಮಾಡಿ. ನಂತರ ಈ ಪುಡಿಗೆ ಕುದಿಸಿ ಆರಿಸಿದ ನೀರನ್ನ ಮಾತ್ರ ಸೇರಿಸಿ ಅರೆಯಿರಿ. ಮಿಶ್ರಣ ನುಣ್ಣಗಾಗುವಂತೆ  ಅರೆದು ಈ ಮಿಶ್ರಣವನ್ನು ಮಾವಿನ ಹೋಳುಗಳೊಂದಿಗೆ ಚೆನ್ನಾಗಿ ಬೆರೆಸಿ. ಇದಕ್ಕೆ ಸಾಸಿವೆ, ಇಂಗು, ಕೊಬ್ಬರಿ ಎಣ್ಣೆಯ ಒಗ್ಗರಣೆ ಕೊಡಿ.
ಈಗ ನಿಮ್ಮ ಮಾವಿನ ಹೊಳುಗಳ ಉಪ್ಪಿನಕಾಯಿ ತಯಾರು.  ಚೆನ್ನಾಗಿ ಮತ್ತೊಮ್ಮೆ ಬೆರೆಸಿ ಜಾಲಿ ಆಥವಾ ಗಾಜಿನ ಶೀಷೆಗೆ ಹಾಕಿ. ಈ ಉಪ್ಪಿನಕಾಯಿಯನ್ನು ಕೂಡಲೇ ಉಪಯೋಗಿಸಬಹುದು.
ಗಮನಿಸಿ : ಮಾವಿನಕಾಯಿ ಗಟ್ಟಿಯಾಗಿರಬೇಕು. ಮಾವಿನ ಸಿಪ್ಪೆ ತೆಗೆದು ಸಹ ಹೊಳುಗಳನ್ನ ಉಪ್ಪು ನೀರಲ್ಲಿ ಬೇಯಿಸಬಹುದು. ಹುಳಿ ಮಾವಿನಕಾಯಿ ಉಪಯೋಗಿಸಿದಲ್ಲಿ ಒಳ್ಳೆಯದು. ಉಪ್ಪಿನ ಪ್ರಮಾಣದ ಮೇಲೆ ನಿಗಾ ಇರಲಿ. ಸ್ವಲ್ಪ ಜಾಸ್ತಿಯಾದಲ್ಲಿ ಚೂರು ಮೆಣಸಿನ ಪುಡಿ ಸೇರಿಸಿ.

No comments:

Post a Comment