Wednesday, May 2, 2018

ಮಾವಿನಕಾಯಿ ಕೆತ್ತೆ ಉಪ್ಪಿನಕಾಯಿ

ಮಾವಿನಕಾಯಿ ಹೋಳು (ಕೆತ್ತೆ) ಉಪ್ಪಿನಕಾಯಿ 
ಮಾವಿನಕಾಯಿ ಕೆತ್ತೆ ಉಪ್ಪಿನಕಾಯಿ ದಕ್ಷಿಣ ಕನ್ನಡ ಹಾಗು ಕರಾವಳಿ, ಉಡುಪಿ ಪ್ರದೆಶಗಳಲ್ಲಿ ಮಾಡುವಂತ ಮತ್ತೊಂದು ಬಗೆಯ ಉಪ್ಪಿನಕಾಯಿ. ಸಾದಾರಣವಾಗಿ ಮಿಡಿ ಉಪ್ಪಿನಕಾಯಿಯ ವಿದಾನವನ್ನೇ ಬಳಸಿ ಮಾಡುವುದು ವಾಡಿಕೆ. ತುಂಬಾ ದಿನ ಉಳಿಯುವ ಈ ಉಪ್ಪಿನಕಾಯಿಯನ್ನ ಗಂಜಿ, ಇಡ್ಲಿ, ದೋಸೆಯೊಂದಿಗೆ ಈಗಲೂ ನೆಂಚಿಕೊಳ್ಳಲು ಉಪಯೋಗಿಸುವರು.
ಕೆತ್ತೆ ಉಪ್ಪಿನಕಾಯಿ ಮಾಡುವ ವಿಧಾನ :
ಬೇಕಾಗುವ ಪದಾರ್ಥಗಳು :
ಮಾವಿನಕಾಯಿಗಳು :  ದೊಡ್ಡದು ಹಾಗು ಸಣ್ಣದು ಎರಡು ಬಗೆಯ ಮಾವಿನಕಾಯಿಯನ್ನು ಉಪಯೋಗಿಸಬಹುದು. ಉಪ್ಪಿನಕಾಯಿಗೆ ಬಳಸುವ ಮಾವಿನಕಾಯಿಯನ್ನೇ ಉಪಯೋಗಿಸಿದರೆ ಒಳ್ಳೆಯದು.  ೫ ರಿಂದ ೬
ಉಪ್ಪು :  ಎರಡರಿಂದ ರಿಂದ ಮೂರು ಮುಷ್ಠಿ ( 2 to 3 Handful)
ಸಾಸಿವೆ : 3 ದೊಡ್ಡ ಚಮಚ
ಮೆಣಸಿನ ಹುಡಿ :5 ರಿಂದ 6 ದೊಡ್ಡ ಚಮಚ
ಇಂಗು : ಸ್ವಲ್ಪ
ಒಗ್ಗರಣೆಗೆ :
ಕೊಬ್ಬರಿ ಎಣ್ಣೆ : 2 ರಿಂದ 3 ದೊಡ್ಡ ಚಮಚ
ಇಂಗು : ಚೂರು
ಮಾಡುವ ವಿಧಾನ :
ಮಾವಿನ ಕಾಯಿಯನ್ನು ಚೆನ್ನಾಗಿ ಬಟ್ಟೆಯಿಂದ ಒರೆಸಿ, ಸಿಪ್ಪೆ ಸಮೇತ ಹೋಳುಗಳಾಗಿ ಹೆಚ್ಚಿ.
ದೊಡ್ಡ ಪಾತ್ರೆಯನ್ನು ಚೆನ್ನಾಗಿ ಒರೆಸಿಕೊಂಡು ಉಪ್ಪು ಮತ್ತು ಮಾನಿನ ಹೋಳುಗಳನ್ನು ಬೆರೆಸಿ. ಒಂದು ಗಾಜಿನ ಕುಪ್ಪಿ/ಶೀಷೆಗೆ ಹಾಕಿ ಮುಚ್ಚಳ ಮುಚ್ಚಿಡಿ. ಇದನ್ನ ಮೂರು ದಿನಗಳ ಕಾಲ  ದಿನಕ್ಕೆ ಒಂದು ಬಾರಿ ಚೆನ್ನಾಗಿ ಕಲೆಸಿಡಬೇಕು. ಉಪ್ಪು ನೀರಾಗಿ ಕರಗುವುದು.
ಒಂದು ಪಾತ್ರೆಯಲ್ಲಿ ನಾಲ್ಕು ಲೋಟೆ ನೀರು ಹಾಕಿ ೨ ಮುಷ್ಠಿ ಉಪ್ಪು ಹಾಕಿ ಕುದಿಸಿ. ಈ ಉಪ್ಪು ನೀರು ಕುಡಿದು ಅರ್ದದಷ್ಟಾಗಬೇಕು. ಈ ನೀರಿಗೆ ಮಾವಿನಕಾಯಿಯಲ್ಲಿ ಕರಗಿದ ಉಪ್ಪು ನೀರನ್ನು ಸೇರಿಸಿ  ೨ ನಿಮಿಷ ಕುದಿಸಿ. ಉಪ್ಪು ನೀರಿನ ಪಾತ್ರೆಯನ್ನು ಕೆಳಗಿರಿಸಿ ತಣ್ಣಗಾಗಲು ಬಿಡಿ. ಒದ್ದೆ ಕೈಯಿಂದ ಈ ನೀರನ್ನು ಮುಟ್ಟಬಾರದು.
ತಣ್ಣಗಾದ ನೀರಿನೊಂದಿಗೆ ಮೇಲೆ ತಿಳಿಸಿದ ಸಾಸಿವೆ ಹಾಗು ಮೆಣಸಿನ ಪುಡಿ ಮಿಕ್ಷಿಯಲ್ಲಿ ನುಣ್ಣಗೆ ಅರೆಯಿರಿ. ಈ ಮಿಶ್ರಣವನ್ನು ಹೋಳು ಮಾವಿನಕಾಯಿಯೊಂದಿಗೆ ಬೆರೆಸಿ. ಚೆನ್ನಾಗಿ ಬೆರೆಸಿ. ನಂತರ ಇಂಗು ಹಾಗು ತೆಂಗಿನ ಎಣ್ಣೆಯ ಒಗ್ಗರಣೆ ಕೊಡಿ. ಎಲ್ಲವನ್ನು ಚೆನ್ನಾಗಿ ಮತ್ತೊಮ್ಮೆ ಬೆರೆಸಿ ಗಾಜಿನ ಶೀಶೆ ಅಥವಾ ಉಪ್ಪಿನಕಾಯಿ ಜಾರಿನಲ್ಲಿ ಹಾಕಿ ಬದ್ರವಾಗಿ ಮುಚ್ಚಿಡಿ. ಬೇಕಾದಲ್ಲಿ ಒಂದೆರಡು ಚಮಚೆ ಎಣ್ಣೆ ಮೇಲಿನಿಂದ ಹಾಕಬಹುದು. ಈ ಉಪ್ಪಿನಕಾಯಿಯನ್ನು ತುಂಬಾ ಬದ್ರವಾಗಿ ಮುಚ್ಚಿಡಬೇಕು. ಎರಡು ವಾರದ ನಂತರ ಮಾವಿನಕಾಯಿ ಕೆತ್ತೆ ಉಪ್ಪಿನಕಾಯಿ ಬಳಸಲು ಯೋಗ್ಯವಾಗಿರುತ್ತದೆ.
ಕಿವಿಮಾತು :
ಯಾವುದೇ ಕಾರಣಕ್ಕೂ ಉಪ್ಪಿನಕಾಯಿ ತಯಾರಿಸುವಾಗ ಒದ್ದೆ ಕೈಯಲ್ಲಿ ಮಾವಿನ ಹೋಳು ಹಾಗು ಕುದ್ದು ಆರಿದ ಉಪ್ಪಿನ ನೀರನ್ನು ಮುಟ್ಟಬಾರದು. ಉಪಯೋಗಿಸುವ ಪಾತ್ರೆಗಳನ್ನು ಒಣ ವಸ್ತ್ರದಲ್ಲಿ ಒರೆಸಿ ಬಳಸಬೇಕು.
ಉದಾಹರಣೆಗೆ : ಮಾವಿನಕಾಯಿ ಹೋಳು ಮತ್ತು ಉಪ್ಪು ಬೆರೆಸುವ ಪಾತ್ರೆ. ಮಿಕ್ಷಿ ಮಾಡುವಾಗ ಮಿಕ್ಷಿ ಜಾರ್ ಮತ್ತೆ ಮುಚ್ಚಳ , ಉಪ್ಪಿನಕಾಯಿ ಹಾಕಿಡುವ ಶೀಶೆ ಅಥವಾ ಉಪ್ಪಿನಕಾಯಿ ಜಾಡಿ. ತುಂಬಾ ಉಪ್ಪಿನಕಾಯಿ ಮಾಡುವಾಗ ಸಾಸಿವೆ ಮತ್ತು ಮೆಣಸಿನ ಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸಿ.
ಮೆಣಸಿನ ಪುಡಿ ಬದಲು ಬ್ಯಾಡಗಿ/ ಘಟ್ಟದ ಮೇಲಿನ ಕೆಂಪು ಮೆಣಸಿನಕಾಯಿ ಉಪಯೋಗಿಸಬಹುದು. ಅದೇ ಸಾಂಪ್ರದಾಯಕ.

No comments:

Post a Comment